Wednesday, December 31, 2008

ಐ ಮಿಸ್ ಯು 2008

ನಮ್ಮೆಲ್ಲರ ಬಾಳಿನ ಕಾದಂಬರಿಯ ಮತ್ತೊಂದು ಅಧ್ಯಾಯ ಇವತ್ತು ಪೂರ್ಣ ಗೊಳ್ಳುತ್ತಾ ಇದೆ. ನಾಳೆಯಿಂದ ಹೊಸ ವರ್ಷ ನಮ್ಮ ಬಾಳ ಹೊಸ ಅಧ್ಯಾಯ ಶುರುವಾಗ್ತಾ ಇದೆ ಒಂಥರಾ ಹೊಸ ಅನುಭೂತಿ ಹೊಸ ಸ್ಪರ್ಶ ಹೊಸ ಹರ್ಷ…. ಒಟ್ಟಿನಲ್ಲಿ ನಮಗೆಲ್ಲ ನವ ವರ್ಷ

ನಾನು ಇದುವರೆಗೆ ನನ್ನ ಬಾಳ ಕಾದಂಬರಿಯನ್ನು ಬರೆಯುತ್ತಾ ಹೋಗಿದ್ದೀನಿ ಈಗ ಆ ಪುಟಗಳನೆಲ್ಲ ತಿರುವಿ ಹಾಕಿ ಏನಾಯ್ತು ಅಂತ ವಿಮರ್ಶಿಸೋಣ ಅಂತ ಅನ್ನಿಸ್ತಾ ಇದೆ… ಅದಕ್ಕೆ ಈ ಸಮಯವೇ ಸುಸಮಯ ಅಂತ ಅನ್ನಿಸ್ತು ಹೇಗಿದ್ರು ನಾಳೆಯಿಂದ ಎಲ್ಲ ಹೊಸತೇ ಅಲ್ವ…. ಯಾವುದನ್ನಾದ್ರು ಮರೆಯಬೇಕು ಅನ್ನಿಸಿದ್ರೆ ಇವತ್ತೇ ಮರೆತು ನಾಳೆಯಿಂದ ಎಲ್ಲ ಫ್ರೆಶ್ ಆಗಿ ಶುರು ಮಾಡಬಹುದು ನೀವೇನಂತೀರಿ…

ನನ್ನ ೧೯ ವರ್ಷಗಳ ಜೀವನದಲ್ಲಿ ಇದೆ ಮೊದಲ ಬಾರಿಗೆ ಇಂಥ ಒಂದು ವಿಮರ್ಶೆ ಮಾಡ್ತಾ ಇರೋದು… ಕಳೆದ ವರ್ಷ ನಾನು ಏನೇನು ಮಾಡಿದೆ ಅಂತ ಯೋಚಿಸಿದರೆ ನೆನಪು ಬರೋ ವಿಷಯಗಳು ತುಂಬ ಕಮ್ಮಿ….ಅದರಲ್ಲಿ ಪ್ರಮುಖವಾದವು ನಾನು ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ್ದು… ಒಂದು ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದು … ಹೇಗೆ ಮರೀಲಿ ನನ್ನೀ ಬ್ಲಾಗ್ ಶುರು ಮಾಡಿದ್ದು…. ಅಷ್ಟೆ…ಉಳಿದವು ನೆನಪಿನಲ್ಲೂ ಇಲ್ಲ….

ಆದರು ೨೦೦೮ ನಂಟುಗಳ ಗಂಟನ್ನು ಹೊತ್ತು ತಂದು ಈ ನನ್ನ ಪುಟ್ಟ ಹೃದಯದಲ್ಲಿ ಹೊಸ ಚೈತನ್ಯವನ್ನಂತು ತಂದಿದೆ…. ಕಳೆದ ಅಧ್ಯಾಯವನ್ನು ಪರಾಮರ್ಶಿಸಿದರೆ ಅದೊಂದು ಅನೇಕ ಘಟನೆಗಳ ಸರಮಾಲೆ… ಅವುಗಳಲ್ಲಿ ಮಿರಿ ಮಿರಿ ಮಿಂಚ್ತಾ ಕೆಲವಿದ್ರೆ ಇನ್ನು ಕೆಲವು ಯಾವುದೋ ಒಂದು ಮೂಲೆಯಲ್ಲಿ ಹಾಯಾಗಿ ಕುಳಿತಿದ್ದು ಬೇಕೆಂದಾಗ ಮಾತ್ರ ನೆನಪಿಗೆ ಬರುವಂಥವು…

2008 ಅನೇಕ ಸ್ನೇಹಿತರನ್ನು ಕೊಟ್ಟಿದೆ… ಇರೋ ಬಂಧಗಳನ್ನು ಗಟ್ಟಿ ಮಾಡಿದೆ… ಆದ್ರೆ ಆಗಲೇ ಇರುವ ಕೆಲವು ಕೊಂಡಿಗಳು ಸಂಪರ್ಕದ ಕೊರತೆಯಿಂದ ಕಳಚುತ್ತಿರುವುದು ನಿಜಾನೆ… ಏನೇ ಆದರು ಈ ವರ್ಷ ಚೆನ್ನಾಗಿಯೇ ಆಯ್ತು ಅನ್ನೋದು ನನ್ನ ಭಾವನೆ…

ಪ್ರತಿ ವರ್ಷ ನಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಅಲ್ವ.. ಕೆಲವೊಂದು ಎಲ್ಲರಿಗೂ ಹೇಳಿ ಸಂತೋಷ ಪಟ್ರೆ ಇನ್ನು ಕೆಲವನ್ನು ನಮ್ಮೆದೆ ಗೂಡಿನಲ್ಲಿ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ ಕಾಪಾಡ್ತೀವಿ… ಕೆಲವು ಹೃದಯಾನ ಹುಚ್ಚೆದ್ದು ಕುಣಿಸಿದ್ರೆ ಕೆಲವು ಎಲ್ಲರಿಂದ ದೂರಾಗಿ ಒಬ್ಬಳೇ ಕುಳಿತು ಅಳುವಂತೆ ಮಾಡುತ್ತವೆ…. ಹೌದಲ್ವಾ “ಈ ಜೀವನ ಬೇವು ಬೆಲ್ಲ ಬಲ್ಲಾತಗೆ ನೋವೆ ಇಲ್ಲ..” ಎಂಥ ಅರ್ಥಪೂರ್ಣ ಸಾಲು…ಆದ್ರೆ ನಮ್ಮಂಥವರು ಸುಖ ದುಃಖ ಎರಡನ್ನು ಸಾಮಾನಾಗಿ ಕಾಣಬೇಕು ಅಂದ್ರೆ ಇನ್ನಷ್ಟು ಪ್ರೌಢಿಮೆ ಬೇಕು ಅಲ್ವ…

ಈಗ ಏನೇ ಯೋಚನೆ ಮಾಡಿದ್ರು ೨೦೦೮ ತನ್ನ ಗಂಟು ಕಟ್ಟಿಕೊಂಡು ಹೊರಡೋಕೆ ಸಿದ್ಧವಾಗಿದೆ… ಎಷ್ಟೇ ಕೇಳಿದ್ರು ಇನ್ನೊಂದು ಕ್ಷಣಾನೂ ಹೆಚ್ಚಿಗೆ ಇರೋಲ್ಲ…. ನೀವೆಲ್ಲ ಕೇಳಿರ್ತೀರ
ಜಿಪುಣ ಅಂದ್ರೆ ಜಿಪುಣ ಈ ಕಾಲ
ಎಷ್ಟೇ ಬಡ್ಡಿ ಕೊಟ್ರು
ಎಷ್ಟೇ ಗಿರವಿ ಇಟ್ರು
ಸಿಕ್ಕೋದಿಲ್ಲ ಒಂದು ಘಳಿಗೆ ಸಾಲ
ಅದಕ್ಕೆ ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೀನಿ… ೨೦೦೮ ರಲ್ಲಿ ಏನು ಆಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ… ೨೦೦೯ ಇನ್ನು ಚೆನ್ನಾಗಿರುತ್ತೆ ಅಂತ ಆಶಿಸ್ತೀನಿ

ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಅಲೆಯೊಂದನ್ನು ಶುರು ಮಾಡಿ ನಿಮೆಲ್ಲರ ಬಾಳು ಹಸನಾಗಿರಲಿ ಎಂದು ಆಶಿಸ್ತಾ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!!!!!!!