Saturday, August 12, 2017

ದೌರ್ಬಲ್ಯ

ಈ ಜಗತ್ತಲ್ಲಿರೋ ಎಲ್ಲರಲ್ಲೂ ಆ ದೇವರು ಒಂದಿಲ್ಲೊಂದು ವಿಶೇಷತೆ ಇಟ್ಟಿರುತ್ತಾನೆ. ಆ ವಿಶೇಷತೆಯಿಂದ ನಾವು ಅವರನ್ನು ಗುರುತಿಸುತ್ತೇವೆ……ಹಾಗೆಯೇ ಪ್ರತಿಯೊಬ್ಬರಲ್ಲೂ ಒಂದು ದೌರ್ಬಲ್ಯವನ್ನು ಇಟ್ಟಿರ್ತಾನೆ….. ಆದ್ರೆ ಈ ದೌರ್ಬಲ್ಯಗಳು ಎಲ್ಲ ಕಾಲದಲ್ಲೂ ನಮಗೆ ಗೋಚರವಾಗದಿದ್ದರೂ ಅದು ಗುಪ್ತಗಾಮಿನಿಯಾಗಿ ನಮ್ಮೊಳಗೆ ಸುಳಿದಾಡುತಿರುತ್ತವೆ……

ಯಾವುದೋ ಒಂದು ಸಂದರ್ಭ….. ಎಲ್ಲ ನಾವೆನಿಸಿರುವಂತೆಯೇ ನಡೆಯುತ್ತಿರುತ್ತೆ…… ಕೊನೆಗೆ ಇನ್ನೇನು ಮುಗೀತು ಅನ್ನೋ ಹೊತ್ತಿಗೆ ಅಂದುಕೊಂಡಿದ್ದೆಲ್ಲ ತಲೆ ಕೆಳಗಾಗಿರುತ್ತೆ……. ಯಾಕೆ ಹೀಗಾಯ್ತು ಅಂತ ಸ್ವಲ್ಪ…ಸ್ವಲ್ಪ ಯೋಚಿಸಿದರೆ ಅದಕ್ಕೆ ನಮ್ಮ ಈ ದೌರ್ಬಲ್ಯಗಲೇ ಕಾರಣ ಅಂತ ಅನ್ನಿಸೋಕೆ ಶುರು ಆಗುತ್ತೆ…. ಇನ್ನು ಸ್ವಲ್ಪ ಜಾಸ್ತಿ ಯೋಚಿಸಿದರೆ ಆ ಸೋಲು ನಮ್ಮ ದೌರ್ಬಲ್ಯಗಳ ಸಾಕಾರ ರೂಪ ಅನ್ನೋದು ಮನದಟ್ಟಾಗುತ್ತೆ……. ಹೌದಲ್ವಾ… ಈ ದೌರ್ಬಲ್ಯಗಳು ನಮ್ಮನ್ನು ಸರಿಯಾದ ಸಮಯಕ್ಕೆ ಕೆಳಗೆಳೆದು ಜಗತ್ತೇ ಶೂನ್ಯ ಎನುವಂತೆ ಮಾಡಿಬಿಡುತ್ತವೆ……

ಈ ದೌರ್ಬಲ್ಯಗಳು ಏನೇ ಇರಬಹುದು….. ಮಾನಸಿಕ ಅಥವಾ ದೈಹಿಕವಾದವು … ಎಲ್ಲ ತೀರ ಅಗತ್ಯವೆನಿಸಿದಾಗಲೇ ಕೈ ಕೊಟ್ಟು ಬಿಡುತ್ತವೆ ಅಲ್ವ…... ಮುಂಗೋಪ, ಮಾತು ಜಾಸ್ತಿ , ಹೊಟ್ಟೆ ಕಿಚ್ಚು, ಅಥವಾ ದೈಹಿಕ ಅಸಮರ್ಥತೆ…… ಯಾವುದೇ ಆಗ್ಲಿ ಅದರ ಬಗ್ಗೆ ನಾವು ಯೋಚಿಸೋದು ಅದರಿಂದ ನಮಗೇನಾದರೂ ತೊಂದರೆಯಾದಾಗ ಮಾತ್ರ…. ಅಲ್ಲಿವರೆಗೂ ನಮಗೆ ಆ ದೌರ್ಬಲ್ಯ ಇದೆ ಅನ್ನೋದೇ ಗೊತ್ತಿರೋಲ್ಲ…..

ಅದೇ ಅದರ ಬಗ್ಗೆನೇ ಜಾಸ್ತಿ ಯೋಚನೆ ಮಾಡಿದ್ರು ನಮಗೆ ಒಂಥರಾ inferiority complex ಬೆಳೆದುಬಿಡುತ್ತೆ…….ಅದರಲ್ಲೇ ಮುಳುಗಿದರೆ ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವಂಥ ಭಾವನೆ ಉಂಟು ಮಾಡುತ್ತವೆ…. ಇನ್ನು ದೌರ್ಬಲ್ಯಗಳ ಬಗ್ಗೆ ಗಮನವನ್ನೇ ಕೊಡದಿದ್ದರೆ ಅವು ನಮ್ಮೊಳಗೆ ಬೆಳೆದು ಅಟ್ಟಹಾಸದಿಂದ ನರ್ತಿಸುವಷ್ಟು ಹೆಚ್ಚಾಗಿಬಿಡುತ್ತವೆ…..ಅಲ್ವ….

ಆದ್ರೆ ಸರಿಯಾದ ಸಮಯಕ್ಕೆ ಅವುಗಳನ್ನು ಗುರುತಿಸಿ ಅವುಗಳನ್ನು ಎದುರಿಸಿ ನಿಲ್ಲುವಂಥ ಶಕ್ತಿ ಬೇಕಾದ್ರೆ ಅಷ್ಟೇ ಹೆಚ್ಚು ಮನೋಸ್ಥೈರ್ಯ ಬೇಕು. ನಮ್ಮೊಳಗೆ ದೌರ್ಬಲ್ಯಗಳಿವೆ ಎಂದು ತಿಳಿದು ಎದೆಗುಂದುವವರೇ ಹೆಚ್ಚು ಆದ್ರೆ ಅವುಗಳ ವಿರುದ್ಧ ನಿಂತು ಯುದ್ಧ ಸಾರುವುದಕೆ ನಮ್ಮ ಮನಸ್ಸನ್ನು ಸಿದ್ಧ ಪಡಿಸಬೇಕು ಅಲ್ವ….

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇವುಗಳೆಲ್ಲವೂ ನಮ್ಮೊಳಗಿರುವ ದೌರ್ಬಲ್ಯಗಳು….. ಅವುಗಳನ್ನು ಮೆಟ್ಟಿ ನಿಂತು ಮುಂದೆ ಹಜ್ಜೆ ಹಾಕಬೇಕೆಂಬ ದೃಢ ಸಂಕಲ್ಪ ನಮ್ಮದಾಗಿದ್ದರೆ ನಮ್ಮನ್ನು ತಡೆಯಲು ಯಾರಿಗೆ ಸಾಧ್ಯ ನೀವೇ ಹೇಳಿ…..

ಅದಕ್ಕೆ ನಮ್ಮ ದೌರ್ಬಲ್ಯಗಳನ್ನು ಬೇರೆಯವರು ಬೆರಳು ಮಾಡಿ ತೋರುವ ಮೊದಲೇ ಅವನ್ನು ಗುರುತಿಸಿ ಅವುಗಳನ್ನು ನಾಶ ಮಾಡಿ ಅಥವಾ ಆದಷ್ಟು ಕಡಿಮೆ ಮಾಡಿ ನಮ್ಮ ಜೀವನ ಸಾಗಿಸುವುದರಲ್ಲೇ ಸಾರ್ಥಕ್ಯ ಪಡೆಯಬೇಕು……ಅಲ್ವ.....

Friday, August 5, 2016

ಮಳೆ

ಈ ಪ್ರಕೃತಿ ತನ್ನಲ್ಲಿ ಏನೇನೆಲ್ಲ ಅದ್ಭುತಗಳನ್ನ ಹುದುಗಿಸಿಟ್ಟುಕೊಂಡಿದೆ…..ಈ ಅದ್ಭುತಗಳು ಒಂದು ಸಣ್ಣ ಕಲ್ಲಿರಬಹುದು ಅಥವಾ ಬೃಹತ್ ಪರ್ವತವಿರಬಹುದು…. ಪ್ರತಿಯೊಂದನ್ನು ಆಸ್ವಾದಿಸುವ ಮನಸಿದ್ದರೆ ಪ್ರಕೃತಿಯ ಪ್ರತಿ ವಸ್ತುವಿನಲ್ಲು ಒಂದು ಅದ್ಭುತ ವಿಷಯ ಅಡಗಿರುತ್ತೆ ಅಲ್ವ…..ಅಂಥ ಅದ್ಬುಥಗಳಲ್ಲಿ ಒಂದು ಈ ಮಳೆ….

ಮಳೆ ತುಂತುರು ಹನಿಯಾಗಿರಬಹುದು…..ಧೋ ಎಂದು ಸುರಿಯುವ ಸುರಿಮಳೆಯಾಗಿರಬಹುದು….. ಒಂದೇ ಸಲ ಅಚಾನಕ್ಕಾಗಿ ಬಂದು ಅಷ್ಟೆ ಬೇಗ ನಿಂತು ಹೋಗುವ ಜಲವರ್ಷವಾಗಿರಬಹುದು……ಎಲ್ಲ ಒಂದು ರೀತಿಯ ಅದ್ಭುತಗಳೇ…..

ಸೋನೆ ಮಳೆಯಲ್ಲಿ ಛತ್ರಿಯಿಲ್ಲದೆ ಆ ಚಿಟಪಟ ಹನಿಗಳಿಗೆ ಮುಖ ಒಡ್ಡಿ ನಡೆಯುವಾಗ…..ಆ ತುಂತುರು ಹನಿಗಳ ನಡುವೆಯೇ ಸ್ಕೂಟಿ ಓಡಿಸುವಾಗ ನಮಗೆ ತಾಗುವ ಪ್ರತಿಯೊಂದು ಹನಿಯು ಒಂಥರಾ ಆನಂದವನ್ನುಂಟು ಮಾಡುತ್ತೆ…..ಹಾಗೆ ಜೋರಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಕಾಲಲ್ಲಿ ನೀರನ್ನು ಚಿಮ್ಮುತ್ತ ನಡೆಯುವುದು……ಆಹಾ ಏನು ಮಜಾ ಅಲ್ವ…….

ಈ ಮಳೆಗಾಲ ಬಂತು ಅಂದ್ರೆ ನಮ್ಮ ನಾಲಿಗೆ ಚಪಲನು ಜಾಸ್ತಿಯಾಗುತ್ತೆ…… ಹೊರಗೆ ಮಳೆ ಸುರಿಯುತ್ತ ಇದ್ರೆ ಒಳಗೆ ಬೆಚ್ಚಗೆ ಕುಳಿತು ಬಿಸಿಯಾದ ತಿಂಡಿ ತಿನ್ನಬೇಕೆನ್ನುವ ಆಸೆ……. ಹುರಿದ ಕಡಲೆಬೀಜ, ಮುಸುಕಿನ ಜೋಳ…..ಆಹಾ ಏನು ಮಸ್ತಾಗಿರುತ್ತೆ …

ಈ ಮಳೆ ನೋಡಿದರೆ ಒಬ್ಬಬ್ಬರಿಗೆ ಒಂದೊಂದು ನೆನಪಾಗುತ್ತೆ…. ಮಳೆಯಲ್ಲಿ ನೆನೆದು ಜ್ವರ ಬಂದದ್ದು, ಸ್ಕೂಲಿಂದ ಮನೆಗೆ ಬರುವಾಗ ಮಳೆ ಬಂದು ಮನೆಗೆ ಓಡಿ ಬಂದದ್ದು, ಮಳೆಯಿಂದ ಒದ್ದೆಯಾಗಿರುವ ನೆಲದ ಮೇಲೆ ನಡೆಯುವಾಗ ಕಾಲು ಜಾರಿ ಬಿದಿದ್ದು, ಮಳೆ ನಿಂತ ಮೇಲೆ ದಾರಿಯಲ್ಲಿ ಹೋಗುವಾಗ ಯಾರೋ ನೀರು ಸಿಡಿಸಿದ್ದು, ಒಂದೇ ಛತ್ರಿಯನ್ನು ಮೂವರು ಹಿಡಿದುಕೊಂಡು ಮೂವರು ನೆನೆದರು ಛತ್ರಿ ಹಿಡಿದೆ ಮನೆಗೆ ಹೋಗಿದ್ದು, ಮಳೆಯಲ್ಲಿ ನಿಂತು ಐಸ್ ಕ್ರೀಮ್ ತಿಂದಿದ್ದು, ದಾರಿಯಲ್ಲಿ ಹೋಗುವಾಗ ಮಳೆ ಬಂದು ಮರದ ಕೆಳಗೆ ನಿಂತಿದ್ದು …..

ಭೂಮಿ ಮೇಲೆ ತನಗಿರೋ ಪ್ರೀತಿಯನ್ನು ವ್ಯಕ್ತ ಪಡಿಸೋಕೆ ಅಂತ ಆ ಆಗಸ ಕಳಿಸುವ ಪ್ರೇಮ ಸಂದೇಶ ಹೊತ್ತು ಬರುವ ಆ ನೀರ ಹನಿಗಳು ಭೂಮಿಗೆ ಚುಂಬಿಸಿ ಸಾರ್ಥಕವಾಗುತ್ತವೆ….ಭೂಮಿಯ ಅಂತರಾಳವನ್ನು ಸೇರಿ ಅದರೊಳಗೆ ಕೆಲ ಹೊತ್ತು ಕಳೆದು ನಂತರ ಆವಿಯಾಗಿ ಆಗಸಕ್ಕೆ ಭೂಮಿಯ ಪ್ರತಿನುಡಿಯನ್ನು ತಿಳಿಸುವ ಸಲುವಾಗಿ ತಮ್ಮ ಪಯಣ ಮುಂದುವರೆಸುತ್ತವೆ……ಈ ಪ್ರಕೃತಿಯಲ್ಲಿ ಇದಕ್ಕಿಂತ ಒಳ್ಳೆಯ ಪ್ರೇಮ ಸಂದೇಶ ರವಾನೆ ವ್ಯವಸ್ಥೆ ಇದೆಯಾ?

ಒಂದೊಂದು ಸಲ ನನಗನಿಸುತ್ತೆ ಈ ಮಳೆಗೂ ಪ್ರೀತಿಗೂ ಎಷ್ಟು ಸಾಮ್ಯತೆ ಇದೆ ಅಲ್ವ…… ಮೋಡ ತುಂಬಿದ ಆಗಸ ನೋಡಿ ಮಳೆ ಬರಬಹುದು ಎಂದು ಆಶಿಸುವಂತೆ ನಾವು ಪ್ರೀತಿಸುವವರು ನಮ್ಮ ಕಣ್ಣೆದುರಿಗೆ ಬಂದರೆ ಅವರ ಮಾತುಗಳನ್ನು ಕೇಳಲು ಮನಸು ಹಾತೊರೆಯುತ್ತೆ….. ಮಳೆ ಬಂದರೆ ಮಾತ್ರ ಭೂಮಿ ತಂಪಾಗುವುದು ಹಾಗೆ ಪ್ರೀತಿ ವ್ಯಕ್ತ ಪಡಿಸಿದಾಗ ಮಾತ್ರ ಅದು ಮನಸಿಗೆ ಸಂತೋಷ ಉಂಟು ಮಾಡುವುದು……ನನ್ನ ಪ್ರಕಾರ ಪ್ರೀತಿ ಅನ್ನೋದು ಕಪ್ಪೆಚಿಪ್ಪಿನಲ್ಲಿಟ್ಟು ಕಾಪಾಡುವಂಥದಲ್ಲ ಮಳೆಯಂತೆ ಎಲ್ಲ ಕಡೆ ಸುರಿದು ಎಲ್ಲರಿಗು ಸಂತೋಷ ನೀಡುವಂಥದ್ದು…ಮಳೆ ಅತಿಯಾದರೆ ಹೇಗೆ ಪ್ರವಾಹ ಉಂಟಾಗಿ ಕಷ್ಟ ನಷ್ಟ ಸಂಭವಿಸುತ್ತೋ ಹಾಗೆ ಪ್ರೀತಿ ಹೆಚ್ಚಾದರೆ ಅದು ನಮ್ಮ ಜೀವನಕ್ಕೆ ಅಡ್ಡಿ ಉಂಟು ಮಾಡುವಂಥದ್ದು…..ಅದಕ್ಕೆ ಪ್ರೀತಿ ಕೂಡ ಮಳೆಯಂತೆ ಹಿತ ಮಿತವಾಗಿರಬೇಕು……

ಏನೇ ಆಗ್ಲಿ ಮಳೆಯಿಂದ ಎಲ್ಲರಿಗೂ ಸಂತೋಷ ಸಿಗುತ್ತೆ…….ಚಿಟ ಪಟ ಮಳೆ ಹನಿಗಳಿಗೆ ಕೈ ಒಡ್ಡಿ ಆ ಹನಿಗಳ ಕಚಗುಳಿ ಅನುಭವಿಸುವುದಕ್ಕೆ ಈ ಕಾಲ ಸುಸಮಯ….ಅಂಥ ಅನುಭವವನ್ನು ಮಿಸ್ ಮಾಡಿಕೊಳ್ಳಬಾರದು ಅಲ್ವ……..

Monday, August 1, 2016

ಸ್ನೇಹದ ಕಡಲಲ್ಲಿ

ಇವತ್ತು ಸ್ನೇಹಿತರ ದಿನಾಚರಣೆ ಅಲ್ವಾ ಅದಕ್ಕೆ ಮೊದಲು ನನ್ನೆಲ್ಲ ಸ್ನೇಹಿತರಿಗೂ ಶುಭಾಶಯಗಳು……ಅವರೆಲ್ಲರಿಗೂ ಉಡುಗೊರೆಯಾಗಿ ಇವತ್ತಿನ ಪೋಸ್ಟ್ ಅವರಿಗೆ ಸಮರ್ಪಿತ…….. ನಮ್ಮ ಜೀವನದಲ್ಲಿ ಯಾವಾಗಿನಿಂದ ಸ್ನೇಹಿತರಿದ್ದಾರೆ ಅಂತ ಯೋಚನೆ ಮಾಡಿದ್ರೆ ನಾವು ಮನುಷ್ಯರನ್ನ ಗುರುತಿಸೋಕೆ ಗೊತ್ತಾದಾಗಿನಿಂದ ಅಂತಾನೆ ಹೇಳಬಹುದು. ಮಾತೆ ಬರದಿದ್ದರು ಸನ್ನೆಗಳ ಮೂಲಕಾನೆ ನಮಗೆ ಬೇಕಾದವರ ಜೊತೆ ಮಾತಾಡ್ತೀವಿ…….ಒಂದೇ ವಯಸ್ಸಿನವರು ಸಿಕ್ಕಿದರಂತು ಅವರ ಭಾಷೆ ಯಾರಿಗೂ ಅರ್ಥ ಆಗದಿದ್ರೂ ಅವರಿಬ್ಬರಿಗೂ ಅರ್ಥ ಆಗುತ್ತೆ…..ಯಾಕಂದ್ರೆ ಅವರಿಬ್ಬರ ನಡುವಿರುವ ಸ್ನೇಹ ಅಂಥದ್ದಾಗಿರುತ್ತೆ….

ನಾವೆಲ್ಲ ಸ್ಕೂಲಿಗೆ ಹೋಗೋಕೆ ಶುರು ಮಾಡಿದ ಮೇಲೆ ಮನೇಲೆ ಆಗ್ಲಿ ಸಂಬಂಧಿಕರೆ ಆಗ್ಲಿ ನೀನು ಯಾವ ಸ್ಕೂಲು ನಿನ್ನ ಟೀಚರ್ ಯಾರು ಅಂತ ಕೇಳಿದ ಮೇಲೆ ನಿನ್ನ ಫ್ರೆಂಡ್ ಯಾರು ಅಂತಾನೆ ಕೇಳೋದು….ಅದಕ್ಕೆ ಈ ಸ್ಕೂಲೇನಿದೆಯಲ್ಲ ಅದು ಒಂಥರಾ ನಮಗೆ ಜೀವನ ಪೂರ ನೆನೆಪಲ್ಲುಳಿಯೋ ಸ್ನೇಹಿತರನ್ನು ಜೊತೆಯಾಗಿಸುವ ತಾಣ ಅಂತಾನೆ ಕರೆಯಬಹುದು……ನನ್ನ ವಯಸ್ಸಿನ ಹುಡುಗ ಹುಡುಗಿಯರಿಗಂತೂ ಸ್ಕೂಲ್ ಫ್ರೆಂಡ್ಸೇ ಜಾಸ್ತಿ ಯಾಕಂದ್ರೆ ನಾವಿನ್ನು ಹೊರ ಜಗತ್ತಿಗೆ ಕಾಲಿಟ್ಟಿಲ್ಲ ನೋಡಿ…..ಈ ಸ್ಕೂಲಲ್ಲಿ ಏನೇನೋ ತರ್ಲೆ ಮಾಡಿ ಸಿಕ್ಕಿ ಹಾಕಿಕೊಂಡಾಗ ಮನೇಲಿ ಹೇಳಬೇಡ ಅಂತ ಸ್ನೇಹಿತರಿಗೆ ಮಸ್ಕಾ ಹೊಡೆಯೋದು….ನಾವು ಸ್ನೇಹಿತರೇ ಸೇರಿ ತಿಂಡಿಗಳಿಗಿಟ್ಟ ಇಂಗ್ಲಿಷ್ ಹೆಸರು….ನಮ್ಮ ತಪ್ಪನ್ನು ಹೇಳದೆ ಇರೋಕೆ ನಮ್ಮ ನಮ್ಮ ನಡುವೇನೆ ಮಾಡಿಕೊಳ್ಳೋ ಆ ಒಳ ಒಪ್ಪಂದ…. ನೆನಪಿಸಿಕೊಂಡರೆ ಈಗಲೂ ನಗು ಬರುತ್ತೆ……

ಸ್ಕೂಲ್ ಅಂದ ತಕ್ಷಣ ಮೊದಲು ನೆನಪಿಗೆ ಬರೋದೇ ಸ್ನೇಹಿತರು ಅಷ್ಟರ ಮಟ್ಟಿಗೆ ನಮ್ಮನ್ನವರು ಆವರಿಸಿಕೊಂಡುಬಿಟ್ಟಿರ್ತಾರೆ ಅಲ್ವ…..ಆ ಹೊಸ ಜೀವನಕ್ಕೆ ಜೊತೆಗಾರರಾಗಿ ಜೊತೆಜೊತೆಯಲ್ಲೇ ಸಾಗಿ ಗೆದ್ದಾಗ ಸಂತೋಷ ಪಟ್ಟು, ಸೋತಾಗ ಸಂತೈಸಿ, ತಪ್ಪಿದಾಗ ಎಚ್ಚರಿಸಿ, ನಮ್ಮ ಜೊತೆ ಸ್ವಲ್ಪ ಹೊತ್ತು ಕಳೆಯಲೆಂದು ಹಾತೊರೆದು ಆ ಒಂದು ಘಳಿಗೆಯಲ್ಲೇ ಎಲ್ಲ ನೋವನ್ನು ಮರೆಸುವಂಥ ಸ್ನೇಹಿತರು ಒಬ್ಬರಾದರು ನಮ್ಮ ಜೀವನದಲ್ಲಿದ್ದೆ ಇರ್ತಾರೆ ಅಲ್ವ…..ಆ ವಿಷಯದಲ್ಲಿ ನಾನಂತೂ ಅದೃಷ್ಟವಂತೆ ಯಾಕಂದ್ರೆ ನನಗೆ ಅಂಥ ಎಷ್ಟೋ ಜನ ಸ್ನೇಹಿತರಿದ್ದಾರೆ…….

ಸ್ಕೂಳಲ್ಲಷ್ಟೇ ಅಲ್ಲ ಕಾಲೇಜಲ್ಲಾಗಿರಬಹುದು ಅಥವಾ ಬೇರೆ ಎಲ್ಲೇ ಆಗಿರಬಹುದು….. ನಾವು ಎಲ್ಲಿಗೆ ಹೋದರು….ಅಲ್ಲಿ ಕೆಲವು ಸಮಯವಷ್ಟೇ ಕಳೆದರೂ ಅಲ್ಲಿಯೂ ನಮ್ಮ ಮನಸು ಸ್ನೇಹಿತರನ್ನು ಹುಡುಕಾಡುತ್ತೆ…..ಅವರ ಜೊತೆ ಒಂದು ಅವರ್ಣನೀಯ ಬಂಧವನ್ನು ನಿರ್ಮಿಸಿ ಅವರಿಂದ ನನ್ನ ಜೀವನಕ್ಕೆ ಹೊಸದೊಂದು ಚಿಗುರು ಮೂಡಿದೆ ಅನ್ನೋ ಭಾವನೆ ಹುಟ್ಟು ಹಾಕುತ್ತೆ…..ಸ್ನೇಹಕ್ಕೆ ಇರೋ ಶಕ್ತಿನೇ ಅಂಥದ್ದು…… ಒಂದು ಸ್ನೇಹ ಹುಟ್ಟೋಕೆ ಎಷ್ಟೋ ವರ್ಷಗಳೇ ಬೇಕಿಲ್ಲ…..ಮನಸಿಗೆ ಹತ್ತಿರವಾಗುವ ಕೆಲವು ನಿಮಿಷಗಳೇ ಸಾಕು…….ಅಲ್ವ….

ಈ ಸ್ನೇಹಕ್ಕೆ ವಯಸ್ಸಿನ ಅಂತರ ಇಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ಸಮವಯಸ್ಕರಾಗಿರುತ್ತಾರೆ…..ಅವರ ಜೊತೆ ನಾವು ಮನ ಬಿಚ್ಚಿ ಮಾತಾಡುವಷ್ಟು ನಮ್ಮ ತಂದೆ ತಾಯಿಯ ಜೊತೆ ಕೂಡ ಮಾತಾಡಿರುವುದಿಲ್ಲ……ಅಂಥ ಗೆಳೆಯರ ಜೊತೆ ಮಾತಾಡಿದಾಗ ಮನಸಿಗೆ ನಿರಾಳ ಅನ್ಸುತ್ತೆ…..ಅಲ್ವ……

ನಮಗೆ ತುಂಬಾನೆ ಅಗತ್ಯವಿರೋ ಸಮಯದಲ್ಲಿ ಜೊತೆಗಿದ್ದು ನಮ್ಮನ್ನು ಯಾವತ್ತು ಬಿಟ್ಟು ಕೊಡದೆ, ನಮ್ಮಿಂದ ಸ್ನೇಹವನ್ನಲ್ಲದೆ ಬೇರೇನನ್ನು ಬಯಸದ ಸ್ನೇಹಿತರಿಗೆ ಈ ದಿನವಷ್ಟೇ ಅಲ್ಲ ಪ್ರತಿದಿನ ಒಂದಲ್ಲ ಸಾವಿರ ಸಾವಿರ ಧನ್ಯವಾದಗಳನ್ನು ಹೇಳಬೇಕು ಅಲ್ವ……..

Sunday, August 9, 2015

ಪ್ರಕೃತಿಯ Love failure case ಗಳು

-->
-೧-
ರವಿಯ ಸ್ವಾಗತಕ್ಕೆ
ಭೂರಮೆಯು ಸಂಭ್ರಮದಿ
ಇಬ್ಬನಿಯ ಹಾರ ತೊಟ್ಟಿಹಳು
ಪಾಪ! ಈ ಪ್ರೀತಿಯ ತಿಳಿಯದ
ಆ ಸೂರ್ಯನು ಸುಡುಸುಡು ತಾಪದಿ
ಆ ಹಾರವನ್ನೇ ನಾಶ ಮಾಡಿದನು..

-೨-
ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು
ಸುತ್ತೆಲ್ಲ ಸುಗಂಧ ಸೂಸಿ
ಪ್ರಿಯಕರನಿಗಾಗಿ ಅರಳಿ ನಿಂತಳು ಪಾರಿಜಾತ
ಎಷ್ಟೋ ಹೊತ್ತಾದ ಮೇಲೆ
ಹಿಂದಿರುಗಿದ ದಿನಕರನಿಗೆ
ಸುಮಬಾಲೆಯ ಸ್ಥಿತಿ ತಂದಿತ್ತು ಆಘಾತ

-೩-
ಹೂವಿಂದ ಹೂವಿಗೆ ಹಾರುತ
ತನ್ನ ಮನದರಸಿಯ ಅರಸುತ
ಸುಮರಾಣಿಯಲ್ಲಿಗೆ ದುಂಬಿಯು ಬಂದಿತು
ಆದರೆ ಅನೇಕ ಹೂಗಳೊಡನೆ
ದುಂಬಿಯ ಕಂಡಿದ್ದ ಸುಮವು
ಪ್ರೇಮದ್ರೋಹಿ ನೀನೆನುತ ದುಂಬಿಯ ತಿರಸ್ಕರಿಸಿತು

Saturday, July 25, 2015

ಸಿಟ್ಟ್ಯಾಕೋ ಸಿಡುಕ್ಯಾಕೋ……

ಹೌದಲ್ವಾ ಕೆಲವೊಂದು ಸಲ ನಮಗೆ ಯಾರೋ ಒಬ್ಬರ ಮೇಲೆ ವಿಪರೀತ ಅನ್ನೋ ಅಷ್ಟು ಪ್ರೀತಿ ಉಕ್ಕಿ ಹರಿಯುತ್ತೆ. ಆ ಪ್ರೀತಿ ಇನ್ನು ಹಾಗೆ ಇರೋವಾಗಲೇ ಅವರ ಮೇಲೆ ಎಲ್ಲಿಲ್ಲದ ಕೋಪ ಬಂದು ಬಿಡುತ್ತೆ. ಅವರ ಮೇಲಿದ್ದ ಪ್ರೀತಿ ಕಡಿಮೆ ಆಗ್ಲಿಲ್ಲ ಅಂದ್ರು ಅವ್ರನ್ನ ಕಂಡರೇ ಆಗೊಲ್ಲವೇನೋ ಅನ್ನೋ ರೀತಿ ಮುಖ ತಿರುಗಿಸಿಕೊಂಡು ಹೋಗ್ತೀವಿ. ಆಗ ಇಬ್ಬರ ಮಧ್ಯೆ ಒಂದು ಸಣ್ಣ ಬಿರುಕು ಮೂಡುತ್ತೆ....... ಅಲ್ಲ ಯಾವ್ದೇ ಕಾರಣ ಇಲ್ಲದೇನೆ ನಮ್ಮ ಮನಸು ಅವರ ಮೇಲೆ ಕೋಪ ಮಾಡಿಕೊಂಡು ಇಬ್ಬರ ನಡುವಿದ್ದ ಸಂಬಂಧಾನೇ ಹಾಳು ಮಾಡಿಬಿಡುತ್ತೆ…..

ಕೋಪ ಮಾಡಿಕೊಂಡಿರೋ ಮನಸಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಗೊತ್ತಾಗೋದೆ ಇಲ್ಲ. ಆ ಸಮಯದಲ್ಲಿ ಅದಕ್ಕೆ ಹೊಳೆದಿದ್ದೇ ಸರಿ. ಯಾರಾದ್ರು ಅಷ್ಟೆ…. ನಮ್ಮ ಮನಸು ಯಾರ ಮೇಲೆ ಕೋಪ ಮಾಡಿಕೊಂಡಿರುತ್ತೋ ಅವರ ಮುಂದೆ ತಲೆ ತಗ್ಗಿಸೋಕೆ ಇಷ್ಟ ಪಡೊಲ್ಲ….ಮಾತು ಬಿಟ್ಟರಂತೂ ಅವರೇ ಮೊದಲು ಮಾತಾಡಿಸಲಿ ಅಂತ ಹಠ ಹಿಡಿದರೆ ಸೋಲೋದೇ ಇಲ್ಲ……ನಮ್ಮ ಮನಸಲ್ಲಿರೋ ಆ ಒಣ ಹಮ್ಮು ಏನಿದೆಯಲ್ಲ ಅದು ಆಗ ನಮ್ಮನ್ನು ಇಷ್ಟ ಬಂದಂತೆ ಆಡಿಸುತ್ತೆ….

ಈ ಬಿರುಕು ಒಂದು ಸಲ ಮೂಡಿದರೆ ಅದನ್ನ ಮುಚ್ಚೋದು ತುಂಬಾ ಕಷ್ಟ. ಕೆಲವೊಂದು ಸಲ ಅಂತು ಬಿರುಕು ಮುಚ್ಚೋಕೆ ಅಂತ ಮಾಡೋ ಕೆಲಸದಿಂದ ಬಿರುಕು ಹೋಗಿ ಕಂದಕಾನೇ ಆಗಿಬಿಡುತ್ತೆ. ನಮ್ಮಿಬ್ಬರ ಮಧ್ಯೆ ಬಿರುಕು ಮೂಡ್ತಾ ಇದೆ ಅನ್ನೋ ಸುಳಿವು ಇಬ್ಬರಲ್ಲಿ ಒಬ್ಬರಿಗೆ ದೊರೆತರು ನಾವು ಆ ಬಿರುಕನ್ನು ಆದಷ್ಟು ಬೇಗ ಮುಚ್ಚಿಬಿಡಬೇಕು. ಇಲ್ಲ ಅಂದ್ರೆ ಒಂದು ಸಣ್ಣ ಕಾರಣದಿಂದ ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಸಂಬಂಧ ಸುಳಿವೇ ಇಲ್ಲದಂತೆ ಮಾಯ ಆಗಿಹೋಗುತ್ತೆ.

ನಾನು ಇದರಲ್ಲೂ ಒಂಥರಾ ವಿಚಿತ್ರವಾದ ಹುಡುಗಿ…. ನಾನು ತುಂಬಾ ಪ್ರೀತಿಸುವವರ ಮೇಲಷ್ಟೇ ಕೋಪ ಮಾಡಿಕೊಳ್ಳೋದು… ಯಾರ ಮೇಲಾದ್ರು ಕೋಪ ಬಂದಿದೆ ಅಂದ್ರೆ ಅವರನ್ನು ತುಂಬಾ ಇಷ್ಟ ಪಡ್ತೀನಿ ಅಂತಾನೆ ಅರ್ಥ…..ಈ ಕೋಪ ಮಿತಿ ಮೀರಿದರೆ ಅವರ ಮುಂದೆ ಏನೋ ದೊಡ್ಡದಾಗಿ ಕೂಗಾಡಿ…. ಕಿರುಚಾಡಿ....... ರೂಮಿಗೆ ಬಂದು ಅಳುತ್ತ ಮಲಗಿಬಿಡ್ತೀನಿ……ನಾನು ಯಾಕೆ ಹಾಗೆ ಮಾಡ್ತೀನೋ ನನಗೆ ಗೊತ್ತಿಲ್ಲ……. ಈ ರೀತಿ ಅಳುತ್ತ ಮಲಗಿದರೆ ನಾನು ಯಾರ ಮೇಲೆ ಕೋಪ ಮಾಡಿಕೊಂಡಿರ್ತೀನೋ ಅವರು ಅಥವಾ ನಮ್ಮಪ್ಪ ಬಂದು ಕರೆಯೋವರೆಗೂ ಈಚೆ ಬರೋಲ್ಲ ಅಲ್ಲೇ ಮಲಗಿರ್ತೀನಿ…….

ಅಲ್ಲ ನಮ್ಮ ಮನಸಿಗೆ ಸಿಟ್ಟು ಬಂದಾಗ ಅದು ಆಡೋ ಮಾತಿಗೆ ತಲೆ ಬುಡ ಇರೋದಿಲ್ಲ…. ಯಾವ್ದೋ ಸಂದರ್ಭದಲ್ಲಿ ಅವರು ಹೇಳಿದ ಮಾತಿಗೆ ನಮ್ಮದೇ ಅರ್ಥ ಕೊಟ್ಟು ಅವರ ಮನಸಿಗೂ ನೋವಾಗೋ ಹಾಗೆ ಮಾತಾಡಿಬಿಡ್ತೀವಿ……ಕೋಪದಲ್ಲಿ ಆಡಿದ ಮಾತಿಗೆ ಹುರುಳಿಲ್ಲ ಅಂತ ಗೊತ್ತಿದ್ರು ಅವರು ನಮ್ಮನ್ನ ಹಾಗೆ ಅಂದುಬಿಟ್ಟರಲ್ಲ ಅಂತ ದುಃಖ ಪಡ್ತೀವಿ….. ಅವರು ಹೊಗಳಿದ್ದಾಗ ಖುಷಿ ಪಡದೆ ಇರೋ ನಾವು ಕೋಪದಲ್ಲಿ ಆಡಿದ ಮಾತೇ ನಿಜ ಅಂತ ನಂಬಿ ಅವರನ್ನ ದ್ವೇಷಿಸೋಕೆ ಶುರು ಮಾಡ್ತೀವಿ……. ಇದೆಲ್ಲ ಸರೀನಾ ನೀವೇ ಹೇಳ್ರಿ……..

ಈ ಹುಸಿಮುನಿಸು ಅಂತ ಏನು ಹೇಳ್ತೀವಲ್ಲ…. ಆ ಮುನಿಸು ಇನ್ನೊಂಥರ… ನಾವು ಯಾರನ್ನು ಪ್ರೀತಿಸುತ್ತೇವೋ ಅವರು ನಮ್ಮನ್ನು ಸ್ವಲ್ಪ ತಿರಸ್ಕಾರ ಮಾಡ್ತಾ ಇದ್ದಾರೆ ಅಂತ ಅನಿಸಿದಾಗ ನಮ್ಮ ಮನಸು ಅವರ ಮೇಲೆ ಈ ಥರದ ಕೋಪ ಮಾಡಿಕೊಳ್ಳುತ್ತೆ…….ಇದಕ್ಕೆ ಯಾವುದೇ ಥರದ ಗಂಭೀರ ಕಾರಣ ಇರೋಲ್ಲ….ಸಣ್ಣ ಸಣ್ಣ ವಿಷಯಗಳಿಗೇ ಸೀಮಿತವಾಗಿರುತ್ತೆ…... ಅವರು ಬಂದು ನಮ್ಮನ್ನು ಮಾತಾಡಿಸಿದರೆ ಅಷ್ಟೆ ಬೇಗ ಆ ಕೋಪ ತೂತಾದ ಬಲೂನಿನ ಥರ ಠುಸ್ಸಂತ ಇಳಿದುಹೋಗುತ್ತೆ…… ನನ್ನದು ೯೯.೯% ಇಂಥ ಹುಸಿಮುನಿಸೇ…..

ಆದ್ರೂ ಈ ಸಿಟ್ಟಿಗೆ ಎರಡು ಮನಸುಗಳನ್ನು ಒಡೆಯುವಷ್ಟು ಶಕ್ತಿಯಿರುತ್ತೆ. ಚಿಕ್ಕ ಮನಸ್ತಾಪ ಮುಂದೆ ಒಂದು ದೊಡ್ಡ ಕದನಾನೆ ಏರ್ಪಡಿಸಿಬಿಡುತ್ತೆ. ಈ ಸಿಟ್ಟೇ ಮುಂದೆ ದ್ವೇಷಕ್ಕೆ ತಿರುಗಿ ಅನಾಹುತಗಳನ್ನ ಮಾಡಿಬಿಡುತ್ತೆ….ಅಂಥ ಸಿಟ್ಟು ನಮಗ್ಯಾಕೆ ಅಲ್ವ…… ನಮ್ಮ ನಡುವಿನ ಪ್ರೀತಿ ಹೆಚ್ಚಿಸುವ ಹುಸಿಮುನಿಸೇ ಸಾಕು ಅಲ್ವ…….

Friday, July 24, 2015

ಪ್ರಕೃತಿ

ನಾ ಬೇಡಿದೆ

ಜೀವನದಾ ಬಳ್ಳಿಯು ಸೊರಗುತಿರುವಾಗ
ನೀರಿಲ್ಲದೆ ತಾ ಒಣಗುತಿರುವಾಗ
ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ
ಚಿಗುರುವ ಚೈತನ್ಯ ತುಂಬುವ
ಸುಧೆಯಾಗು ನೀನು, ಮಳೆಯಾಗು ನೀನು ……

ನಿರಾಸೆಯ ಗವಿಯ ನಾ ಹೊಕ್ಕಿರುವಾಗ
ಕತ್ತಲ ಭೀತಿಯಿಂದ ತತ್ತರಿಸಿರುವಾಗ
ಭಯಾನಕ ಕಗ್ಗತ್ತಲ ಕೊಂದು
ಬಾಳ ದಾರಿಯ ತೋರುವ
ಆಶಾಕಿರಣವಾಗು ನೀನು, ಬೆಳಕಾಗು ನೀನು…….

ಕಷ್ಟಗಳ ಚಳಿಯಲ್ಲಿ ನಾ ನಡುಗಿರುವಾಗ
ದುಷ್ಟರ ಅಟ್ಟಹಾಸದೆದುರು ಕಂಗೆಟ್ಟಿರುವಾಗ
ಚಳಿಯ ಮಾರುತಗಳ ಎದುರಿಸಿ
ದುಷ್ಟರ ಹಾದಿಯನು ದುರ್ಗಮಗೊಳಿಸುವ
ತಡೆಯಾಗು ನೀನು, ಹೆಬ್ಬಂಡೆಯಾಗು ನೀನು…….

ಭವದ ಬೇಗೆಯಲಿ ನಾನು ಬೇಯುತಿರುವಾಗ
ನೋವುಗಳ ತಾಪದಿ ಪರಿತಪಿಸಿರುವಾಗ
ಬಿಸಿಲ ಬೇಗೆಯ ತಣಿಸಿ
ಜೀವಕ್ಕೆ ತಂಪನ್ನೀಯುವ
ವರವಾಗು ನೀನು, ತಂಗಾಳಿಯಾಗು ನೀನು……

ಅಶರೀರ ವಾಣಿಯೊಂದು ನುಡಿಯಿತು

ಹೀಗೇಕೆ ಬೇಡುತಿರುವೆ ನೀ ನನನ್ನು
ಗುರುತಿಸಿಲ್ಲವೇ ನೀನು ನಿನ್ನ ಶಕ್ತಿಯನ್ನು?

ನಿನಗಿರುವ ಗುರಿ ನಿನ್ನಾಕಾಂಕ್ಷೆಯ ಕಾಮನಬಿಲ್ಲು
ನಿನ್ನ ಶ್ರಮವೇ ಅದಕೆ ನೀರೆರೆವ ಮಳೆ
ನಿನ್ನ ಛಲವೇ ನಿನಗೆ ದಾರಿ ತೋರುವ ಬೆಳಕು
ನಿನ್ನ ಧೈರ್ಯವೇ ಹೆಬ್ಬಂಡೆ
ನಿನ್ನ ಜೀವನದಲ್ಲಿರುವ ಪ್ರೀತಿ ವಿಶ್ವಾಸಗಳೇ ತಂಗಾಳಿ

ಈ ಶಕ್ತಿಗಳಿದ್ದು ಈ ದೈನ್ಯತೆ ನಿನಗೇಕೆ?
ನೀ ಸಮರ್ಥನಾಗಿರುವಾಗ ನನ್ನ ಹಂಗೇಕೆ?
ಇವೆಲ್ಲವುಗಳ ಸದ್ವಿನಿಯೋಗ ನೀ ಮಾಡು
ಸಿಗುವುದು ಕೀರ್ತಿ- ಯಶಸ್ಸು ನೀ ನೋಡು…..


ಹೌದಲ್ವೆನ್ರಿ ನಾವೇನೇನನ್ನು ಬಯಸುತ್ತೇವೋ ಅದೆಲ್ಲ ನಮ್ಮಲ್ಲೇ ಇದೆ…..ಹಾಗಾಗಿ ನಾವು ಈಗ ಇರೋ ಪರಿಸ್ಥಿತಿಗೆ ನಾವೇ ಜವಾಬ್ದಾರರು….ಒಳ್ಳೆಯದಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ನಮ್ಮಿಂದಲೇ ಆಗಿರುತ್ತೆ. ನಮಗಿರುವ ಎಲ್ಲ ಸದ್ಗುಣಗಳ ಉಪಯೋಗದಿಂದ ಈ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದವರು ನಾವೇ ಅಲ್ವ…… ನಮ್ಮ ಜೀವನವನ್ನು ಬೇರೆ ಯಾರೋ ಬಂದು ಸುಧಾರಿಸಲಿ ಅನ್ನೋದು ಮೂರ್ಖತನ ಅಲ್ವ……..ನೀವೇ ಯೋಚನೆ ಮಾಡಿ………

Friday, June 12, 2015

ವಾಗರ್ಥ

ಈ ಮಾತುಗಳೇಕೆ ಹೀಗೆ?
ಹೇಳಿದರೂ ಹೇಳದಂತೆ,
ಕೇಳಿದರೂ ಕೇಳದಂತೆ,
ಅರಿತರೂ ಅರಿಯದಂತೆ!

ಪದಗಳನ್ನು ಪೋಣಿಸಿದ
ಮಾತುಗಾರನ ಆಂತರ್ಯದಲ್ಲಿ
ಹೇಳಲೇ, ಹೇಳದೇ ಉಳಿದುಬಿಡಲೇ
ಎಂಬ ಗೊಂದಲದ ನೆರಳು!

ಕಿವಿಗೆ ಬಿದ್ದ ಸ್ವರವ ಆಯ್ದ
ಕೇಳುಗನ ಅಂತರಾಳದಲ್ಲಿ
ಕೇಳಿದ ಮಾತು ಸತ್ಯವೇ ಅಥವಾ
ಕೇಳಿದ್ದೇ ಸುಳ್ಳೇ ಎಂಬ ಗೋಜಲು

ಪುನರಚಿತ ಶಬ್ದ ಮಾಲೆಗೆ
ಅರ್ಥ ತುಂಬುವ ಕೇಳುಗನಿಗೆ
ಕಹಿ ಸತ್ಯದ ದರ್ಶನವಾದರೆ,
ತಿಳಿದದ್ದೂ ತಿಳಿಯದಂಥ ಕತ್ತಲು!

ಹೇಳುಗನು ಹೇಳಬಯಸುವ ಮಾತು
ಕೇಳುಗನು ಕೇಳಬಯಸುವ ಮಾತಿನ
ಅರ್ಥ ವ್ಯತ್ಯಾಸದಲಿ ಕಳೆದುಹೋದರೆ,
ಈ ಮಾತಿನರ್ಥ ಯಾರ ಸ್ವತ್ತು?

Saturday, January 31, 2015

ಕನಸೇ….

-->
ಈ ಜಗತ್ತಲ್ಲಿ ಯಾರಿಗೆ ತಾನೆ ಕನಸುಗಳು ಬೀಳೋದಿಲ್ಲ ಹೇಳ್ರಿ… ಕೆಲವರು ಮಲಗಿದ್ದಾಗಷ್ಟೇ ಕನಸು ಕಂಡರೆ ಕೆಲವರು ಜಾಗೃತರಾಗಿದ್ದಾಗಲೇ ಕನಸು ಕಾಣುತ್ತಾರೆ… ಕೆಲವರು ಕಂಡ ಕನಸನ್ನು ನನಸಾಗಿಸಿದರೆ ಕೆಲವರು ಆ ಕನಸು ನನಸಾಗಿಸುವ ಪ್ರಯತ್ನವನ್ನೇ ಮಾಡುವುದಿಲ್ಲ… ನಾವು ಅದಕ್ಕೆ ಗಮನ ಕೊಡಲಿ ಕೊಡದೆ ಇರಲಿ ಕನಸುಗಳನ್ನಂತು ಕಾಣುತ್ತಲೇ ಇರುತ್ತೇವೆ… ಅಲ್ವ..
ರಾತ್ರಿ ಮಲಗಿದ್ದಾಗ ಕಾಣೋ ಕನಸುಗಳು ಕೆಲವೊಮ್ಮೆ ನಗು ತರುವಂಥವಾಗಿರುತ್ತವೆ… ಇಂಥ ಸಂದರ್ಭಗಳು ನಮ್ಮ ಜೀವನದಲ್ಲಿ ಬರಲು ಸಾಧ್ಯವೇ ಇಲ್ಲ ಅಂತ ಅನ್ನಿಸೋದು ಅಷ್ಟೆ ನಿಜ…. ಕಾಣದ ಎಷ್ಟೋ ಸುಂದರ ತಾಣಗಳಲ್ಲಿ ವಿಹರಿಸಿದ್ದೇನೆ… ಕಲ್ಪನೆಗೆ ನಿಲುಕದ ಮನೋಹರ ದೃಶ್ಯಗಳನ್ನು ಕಂಡಿದ್ದೇನೆ …. ಕೆಲವು ಕನಸುಗಳಂತೂ ನಿಜವಾದರೆ ಎಷ್ಟು ಚಂದ ಅಂತ ಯೋಚನೆ ಮಾಡಿದ್ದೀನಿ…. ಒಂದು ಸುಂದರಲೋಕ ತನ್ನಷ್ಟಕ್ಕೆ ತಾನೆ ತೆರೆದುಕೊಳ್ಳುತ್ತಾ ಹೋದಂತೆ ಅದರಲ್ಲೇ ಲೀನವಾಗಿ ಅಂಥ ಮೋಹಕತೆಗೆ ಮರುಳಾಗಿ ಮತ್ತೆ ವಾಸ್ತವ ಸ್ತಿತಿಗೆ ಮರಳಿದಾಗ ಇನ್ನೊಂದಿಷ್ಟು ಹೊತ್ತು ಹಾಗೆ ಇರಬಾರದಾಗಿತ್ತ ಅಂತ ಬೇಸರಾನು ಪಟ್ಟಿದ್ದೀನಿ…..
ಕೆಲವೊಮ್ಮೆ ಅಷ್ಟೆ ಭಯಾನಕ ಕನಸುಗಳನ್ನು ಕಂಡು ಬೆಚ್ಚಿ ಬಿದ್ದದ್ದು ಇದೆ… ಆದ್ರೆ ಅದೇನಿದ್ದರು ಚಿಕ್ಕ ವಯಸ್ಸಿಗೆ ಸೀಮಿತವಾಗಿತ್ತು….. ಈಗ ಅಂತ ಭಯ ಹುಟ್ಟಿಸುವ ಕನಸುಗಳನ್ನು ಕಂಡದ್ದೇ ಇಲ್ಲ… ನಾನು ಚಿಕ್ಕವಳಿದ್ದಾಗ ಒಂದು ಸಿನಿಮ ನೋಡಿ ಎಷ್ಟು ಭಯ ಪಟ್ಟಿದ್ದೆ ಅಂದ್ರೆ… ಕಣ್ಣು ಮುಚ್ಚಿಇನ್ನೇನು ನಿದ್ದೆ ಬಂತು ಅಂದ್ರೆ ಅದೇ ಚಿತ್ರಗಳು…. ಸುಮಾರು ೧೫ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ… ಆದ್ರೆ ಈಗ ಅದನ್ನು ನೆನೆಸಿಕೊಂಡರೆ ನಗು ಬರುತ್ತೆ…. ಅದರಲ್ಲಿ ಅಷ್ಟು ಹೆದರಿಕೊಳ್ಳುವಂಥದ್ದು ಏನು ಇರಲಿಲ್ಲ ಅಲ್ವ ಅಂತ ನಕ್ಕು ಸುಮ್ಮನಾಗ್ತೀನಿ ಅಷ್ಟೆ…
ಬರಿ ಇದಷ್ಟೇ ಕನಸಲ್ಲ ಅಲ್ವ…. ನಾವು ಜಾಗೃತರಾಗಿದ್ದಾಗ ನಮ್ಮ ಮುಂದಿನ ಜೀವನ ಹೀಗೆ ಇರಬೇಕು ಅಂತ ನಾವು ಹಾಕೋ ಯೋಜನೆಗಳನ್ನು ನಾವು ಕನಸುಗಳು ಅಂತಾನೆ ಕರೆಯೋದು ಅಲ್ವ…. ಈ ಮುಂಚೆ ಹೇಳಿದ ಕನಸುಗಳು ನಿದ್ದೆಯಲ್ಲಿ ಗೋಚರಿಸಿದರೆ ಈ ಕನಸುಗಳು ನಮಗೆ ನಿದ್ದೆಮಾಡಲು ಬಿಡುವುದಿಲ್ಲ…. ಕಂಡ ಕನಸು ಬರಿ ಕನಸಾಗಿಯೇ ಮಣ್ಣಾಗುವುದಕ್ಕೆ ಬಿಡದೆ ಆ ಕನಸನ್ನು ಬೆನ್ನಟ್ಟಿ ಅದನ್ನು ನನಸು ಮಾಡಿಯೇ ತೀರಬೇಕೆಂಬ ಛಲ ನಮ್ಮಲ್ಲಿ ಉದಯವಾದರೆ ನಮ್ಮನ್ನು ತಡೆಯುವವರು ಯಾರು ಇರೋಲ್ಲ ನೀವೇನಂತೀರಿ?
ಇತ್ತೀಚ್ಗೆ ನಾನು ಓದಿದ “THE ALCHEMIST” ಎಂಬ ಕಥೆಯಲ್ಲಿ ನನಗಿಷ್ಟವಾಗಿದ್ದು ಅದೇ ಸಾಧಿಸಿಯೇ ತೀರಬೇಕೆಂಬ ಕಥಾನಾಯಕನ ಛಲ… ಏನೇ ಕಷ್ಟ ಎದುರಾದರು ಅದನ್ನು ಸಮರ್ಥವಾಗಿ ಎದುರಿಸಿ ನಮ್ಮ ಕನಸಿಗೆ ಸಾಕಾರ ರೂಪ ಕೊಡುವ ಹಂಬಲ, ಅದನ್ನು ಕಾರ್ಯರೂಪಕ್ಕೆ ತರಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಅಸಾಧ್ಯವಾದ ಕೆಲಸ ಯಾವುದು ಇಲ್ಲ……
ನಾವೆಲ್ಲರೂ ನಮ್ಮ ಜೀವನ ಹೀಗೆ ಇರಬೇಕೆಂದು ಕನಸು ಕಂಡೆ ಇರುತ್ತೇವೆ…. ಆದರೆ ಅದು ನನಸಾಗುವುದಕ್ಕೆ ಬೇಕಾದಷ್ಟು ಸಮಯ ಇದೆಅಂತ ಕೈ ಕಟ್ಟಿ ಕೂರುವುದಕ್ಕಿಂತ ಆ ಗುರಿಯತ್ತ ಸಾಗುವ ಸಲುವಾಗಿ ನಮ್ಮ ಪಾಲಿನ ಕರ್ತವ್ಯವನ್ನು ಮಾಡಲೇಬೇಕು ಅಲ್ವ… ಆದರೆ ಆಕನಸುಗಳು practical ಆಗಿ ಇರಬೇಕು ಅನ್ನೋದನ್ನು ನಮ್ಮ ಮನಸಲ್ಲಿಟ್ಟುಕೊಂಡಿರಬೇಕು…
ನಾವು ಕಂಡ ಕನಸುಗಳಲ್ಲಿ ಕೆಲವು ನಿಜವಾಗಿದ್ದರೆ ಎಷ್ಟು ಚೆನಾಗಿರ್ತಿತ್ತು ಅಂತ ಹೇಗೆ ಯೋಚಿಸ್ತೀವೋ ಹಾಗೆ ಕೆಲವು ನಮ್ಮ ಬಾಳಹಾದಿಯಲ್ಲಿ ಯಾವುದೇ ಕಾರಣಕ್ಕೂ ಇದಿರಾಗದೆ ಇರಲಿ ಅಂತಾನು ಬಯಸ್ತೀವಿ…. ಕಂಡ ಕನಸೆಲ್ಲ ನನಸಾಗದೇ ಇರಬಹುದು ಆದರೆ ಅದನ್ನು ಸಾಧಿಸುವ ನಮ್ಮ ಹಾದಿಗೆ ಯಾವತ್ತು ಮಬ್ಬು ಆವರಿಸಲು ಬಿಡದೆ ಅದರತ್ತ ಇಡುವ ಪ್ರತಿ ಹೆಜ್ಜೆಯೂ ಮುಂದೆಯೇ ಇಡಬೇಕು …. ಯಾವುದೋ ಒಂದು ವಿಘ್ನ ಎದುರಾಯಿತೆಂದು ನಮ್ಮ ಹೆಜ್ಜೆ ಹಿಂದೆ ಸರಿಯಬಾರದು…. ವಿಘ್ನಗಳಿರೋದೆ ನಮಗೆ ತೊಡುಕುಂಟು ಮಾಡೋಕೆಅಲ್ವ….
ಹಗಲುಗನಸನ್ನು ಯಾರು ಬೇಕಾದ್ರೂ ಕಾಣುತ್ತಾರೆ ಆದರೆ ಅದು ನಿಜ ಜೀವನದಲ್ಲಿ ರೂಪ ಪಡೆಯುವುದನ್ನು ಕಾಣುವುದು ಎಲ್ಲರಿಗೂ ಸಾಧ್ಯವಿಲ್ಲ….. ಏನೇ ಆಗಲೀ ನಿಮ್ಮ practical ಕನಸುಗಳೆಲ್ಲ ನನಸಾಗಲಿ….